ಬಕ್‍ನರ್, ಎಡುಯರ್ಡ್
1860-1917. ಜರ್ಮನ್ ರಸಾಯನ ವಿಜ್ಞಾನಿ. ಜನನ 20-5-1860, ಮರಣ 24-8-1917. ಕಿಣ್ವ ರಸಾಯನ ವಿಜ್ಞಾನದ (ಎನ್‍ಜೈಮ್ ಕೆಮಿಸ್ಟ್ರಿ) ಇತಿಹಾಸವನ್ನು ಬಕ್‍ನರ್‍ಪೂರ್ವ ಮತ್ತು ಬಕ್‍ನರುತ್ತರ ಕಾಲಗಳೆಂದು ವಿಂಗಡಿಸುವುದು ವಾಡಿಕೆ. ಇದು ಈತನ ಈ ನಿಟ್ಟಿನಲ್ಲಿ ಸಲ್ಲಿಸಿದ ಮಹತ್ತರ ಸಂಶೋದನೆಯ ಸೂಚಕ. ಇವನ ತಂದೆ ಅರ್ನೆಸ್ಟ್ ಬಕ್‍ನರ್ ಮ್ಯೂನಿಕ್ಕಿನಲ್ಲಿ ವೈದ್ಯಶಾಸ್ತ್ರ ಮತ್ತು ಪ್ರಸವಶಾಸ್ತ್ರ ಪ್ರಾಧ್ಯಾಪಕ. ಅಣ್ಣ ಹ್ಯಾನ್ಸ್ ಏಕಾಣುಜೀವಿವಿಜ್ಞಾನಿ. ಹೀಗೆ ಎಡುಯರ್ಡನಿಗೆ ಬಾಲ್ಯದಿಂದಲೇ ರಸಾಯನ ವಿಜ್ಞಾನದ ಒಲವು ಒದಗಿ ಬಂತು. ಅಣ್ಣ ನಡೆಸುತ್ತಿದ್ದ ಪ್ರಯೋಗಗಳನ್ನು ಗಮನಿಸುತ್ತಿದ್ದ ಎಡುಗಾರ್ಡ್ ಸಹಜವಾಗಿಯೇ ಹುದುಗು (ಫರ್ಮೆಂಟೇಷನ್) ಕ್ರಿಯೆಯ ಅಧ್ಯಯನ ತೊಡಗಿದ. ಆಗ ಇದರ ಬಗ್ಗೆ ಸ್ಷಷ್ಟ ಚಿತ್ರವಿರಲಿಲ್ಲ. ಹಣ್ಣಿನ ರಸದಿಂದ ವೈನ್ ಮದ್ಯ ಮತ್ತು ಹಿಟ್ಟಿನಿಂದ ಬ್ರೆಡ್ ಮಾಡುವಾಗ ಹುದುಗು ಕ್ರಿಯೆಯ ಪಾತ್ರವಿದೆ ಎಂದು ತಿಳಿದಿತ್ತೆ ವಿನಾ ಅದರ ಸ್ವರೂಪವೇನೆಂಬುದು ಗೊತ್ತಿರಲಿಲ್ಲ.

ಸಸ್ಯ ಮತ್ತು ಪ್ರಾಣಿ ಮೂಲಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಡೆದ ಎಣ್ಣೆಗಳು, ಅಕ್ಕಿ, ಬೇಳೆ, ಸಕ್ಕರೆ, ಹಾಲು, ಜೇನುತುಪ್ಪ ಮೊದಲಾದವನ್ನು ಆಗ್ರ್ಯಾನಿಕ್ ಪದಾರ್ಥಗಳೆಂದೂ ಉಪ್ಪು, ಸುಣ್ಣ, ಗಾಜು, ಲೋಹ ಇತ್ಯಾದಿ ಖನಿಜೋತ್ಪನ್ನಗಳನ್ನು ಇನಾಗ್ರ್ಯಾನಿಕ್ ಪದಾರ್ಥಗಳೆಂದೂ ವಿಂಗಡಿಸುವುದು ಆಗ ವಾಡಿಕೆಯಾಗಿತ್ತು. ಆಗ್ರ್ಯಾನಿಕ್ ಪದಾರ್ಥಗಳ ಜಟಿಲ ರಚನೆ ಅಂದಿನ ರಸಾಯನವಿಜ್ಞಾನಿಗಳಿಗೆ ಒಂದು ಒಗಟಾಗಿತ್ತು. ಈ ಪದಾರ್ಥಗಳನ್ನು ಪ್ರಯೋಗ ಶಾಲೆಯಲ್ಲಿ ಸಂಶ್ಲೇಷಿಸಲು ವಿಫಲರಾದ ಅವರು, ಜೀವಿಗಳಲ್ಲಿ ಮಾತ್ರ ಇರುವ ಯಾವುದೋ ಅವ್ಯಕ್ತ ಜೈವಿಕಶಕ್ತಿ (ವೈಟಲ್ ಫೋರ್ಸ್) ಆಗ್ರ್ಯಾನಿಕ್ ಪದಾರ್ಥಗಳು ಮೈದಳೆಯಲು ಕಾರಣವೆಂದು ತರ್ಕಿಸಿದರು. ಆದರೆ 1828ರಲ್ಲಿ ವೋಲರ್ ಎಂಬಾತ ಶುದ್ದ ಇನಾಗ್ರ್ಯಾನಿಕ್ ಸಂಯುಕ್ತವಾದ ಅಮೊನಿಯಮ್ ಸಯನೇಟನ್ನು ಕಾಸಿ ಯೂರಿಯ ತಯಾರಿಸಿದ. ಅಲ್ಲಿಯತನಕ ಈ ಆಗ್ರ್ಯಾನಿಕ್ ಪದಾರ್ಥವನ್ನು ಪ್ರಾಣಿಗಳ ಮೂತ್ರ ಪಿಂಡಗಳು ಮಾತ್ರ ಉತ್ಪಾದಿಸಬಲ್ಲವು ಮತ್ತು ಅವುಗಳ ಮೂತ್ರದಲ್ಲಿ ವಿಸರ್ಜಿತವಾದ ಅಂಶವನ್ನು ಮಾತ್ರ ಪ್ರತ್ಯೇಕಿಸಬಹುದು ಎಂಬ ಭಾವನೆಯಿತ್ತು. ಈ ಆವಿಷ್ಕಾರದಿಂದ ಜೈವಿಕ ಸಿದ್ಧಾಂತಕ್ಕೆ ಬಲವಾದ ಪೆಟ್ಟು ಬಿತ್ತು. 1844ರಲ್ಲಿ ಕೋಲ್ಬೆ ಎಂಬಾತ ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ನುಗಳಿಂದ ಅಸಿಟಿಕ್ ಆಮ್ಲವನ್ನೂ 1856ರಲ್ಲಿ ಬರ್ತೆಲೊ ಎಂಬಾತ ಅಂಗ ಧಾತುಗಳಿಂದ ಈಥೇನನ್ನೂ ಸಂಶ್ಲೇಷಿಸಿದುದು ಜೈವಿಕ ಸಿದ್ಧಾಂತಿಗಳಿಗೆ ನುಂಗಲಾರದ ತುತ್ತಾಯಿತು.

	ಇದರಿಂದ ಧೃತಿಗೆಡದೆ ಅವರು ಹುದುಗು ಕ್ರಿಯೆಯ ಬೆನ್ನುಹತ್ತಿದರು. ಪ್ರಯೋಗ ಶಾಲೆಯಲ್ಲಿ ಆಗ್ರ್ಯಾನಿಕ್ ಪದಾರ್ಥಗಳ ತಯಾರಿಕೆಗೆ ಉನ್ನತ ಉಷ್ಣತೆ, ತೀಕ್ಷ್ಣದ್ರಾವಕಗಳು ಇತ್ಯಾದಿಗಳ ಅಗತ್ಯವಿದೆ. ಆದರೆ ಜೀವಕೋಶ ಸಾಮ್ಯಪರಿಸ್ಥಿತಿಯಲ್ಲಿ ಇವನ್ನು ತಯಾರಿಸುತ್ತಿದೆ. ಇಂಥ ಸಂಕೀರ್ಣ ಸಂಶ್ಲೇಷಣೆಗಳು ಕೇವಲ ಶರೀರೋಷ್ಣತೆಯಲ್ಲಿ ಆಮ್ಲೀಯವೂ ಅಲ್ಲದ ಕ್ಷಾರೀಯವೂ ಅಲ್ಲದ ಜಲೀಯ ದ್ರಾವಣದಲ್ಲಿ ನಿರಂತರವಾಗಿ ನಡೆಯುತ್ತಿಲ್ಲವೇ? ಇದಕ್ಕೆ ಜೈವಿಕ ಶಕ್ತಿಯೋಕಾರಣ ಎಂದು ಅವರು ಪಟ್ಟುಹಿಡಿದರು. ಜೀವಕೋಶಗಳಲ್ಲಿದ್ದ ಫರ್ಮೆಂಟುಗಳು ಅಂದರೆ ಕ್ರಿಯಾವರ್ಧಕಗಳು ಪ್ರಯೋಗಶಾಲೆಯಲ್ಲಿ ನಡೆಸಿದ ಕ್ರಿಯೆಗಳಲ್ಲಿ ಇರದಿದ್ದುದೇ ಇದರ ಕಾರಣ. 

	ಇದನ್ನು ಖಚಿತ ಪಡಿಸಿಕೊಳ್ಳಲು ಷ್ವಾನ್ ಮತ್ತು ಸಂಗಡಿಗರು ಫರ್ಮೆಂಟುಗಳನ್ನು ಬೇರ್ಪಡಿಸಿ ಅವು ಪ್ರಯೋಗಶಾಲೆಯಲ್ಲಿ ನಡೆಸುವ ಪ್ರನಾಳ ಕ್ರಿಯೆಗಳಲ್ಲಿ ಅಜೈವಿಕ ರಾಸಾಯನಿಕಗಳೊಡನೆಯೂ ವ್ಯವಹರಿಸಬಲ್ಲವು ಎಂದು ತೋರಿಸಿದರು. ಜೈವಿಕ ಸಿದ್ಧಾಂತಿಗಳು ಈ ವಿಚಾರಧಾರೆಯನ್ನು ವಿರೋಧಿಸಿದರು.  ಷ್ವಾನ್ ಮತ್ತು ಸಂಗಡಿಗರು ಬೇರ್ಪಡಿಸಿದ ಫರ್ಮೆಂಟುಗಳು ಅನ್ನನಾಳದಿಂದ ಪಡೆದಂಥವು. ಪಚನ ಕ್ರಿಯೆಗಳಲ್ಲಿ ಮಾತ್ರ ಅವು ಭಾಗಿಗಳು. ಜೀವಕೋಶದೊಳಗೆ ಜರಗುವ ಸಕ್ಕರೆಯನ್ನು ಆಲ್ಕೊಹಾಲಿಗೆ ಪರಿವರ್ತಿಸುವಂಥ ಕ್ರಿಯೆಗಳನ್ನು ಅವು ಪ್ರಚೋದಿಸಲಾರವು. ಆ ವಿಶಿಷ್ಟ ಕ್ರಿಯೆಗಳಿಗೆ ಜೈವಿಕ ಶಕ್ತಿ ಆತ್ಮಾವಶ್ಯಕ ಎಂದು ಅವರು ಸಮರ್ಥಿಸಿಕೊಂಡರು. ಜೀವಕೋಶದ ಹೊರಗಡೆ ವ್ಯವಹರಿಸುವ ಫರ್ಮೆಂಟುಗಳನ್ನು ಕಿಣ್ವಗಳು (ಎಂಜೈಮಗಳು) ಎಂದು ಹೆಸರಿಸಲಾಯಿತು. ಹೀಗೆ ಸಲಹೆ ಮಾಡಿದಾತ ಕೂನ್.

	ಈ ಹಿನ್ನಲೆಯಲ್ಲಿ ಬಕ್‍ನರ್ ರಂಗ ಪ್ರವೇಶಿಸಿದ. ಆಲ್ಕೋಹಾಲಿಕ್ ಹುದುಗು ಕ್ರಿಯೆಗೆ ಜೈವಿಕ ಶಕ್ತಿಯ ನೆರವು ಇರಲೇಬೇಕೆಂದು ಪ್ರಯೋಗದಿಂದ ತೋರಿಸಲು ಸಿದ್ಧನಾದ. ಇದರ ಸಲುವಾಗಿ ಯೀಸ್ಟ್‍ಕೋಶಗಳನ್ನು ಮರಳಿನೊಂದಿಗೆ ಚೆನ್ನಾಗಿ ಅರೆದು ಒಂದೂ ಬದುಕುಳಿಯದಂತೆ ಮಾಡಿದ. ದ್ರವವನ್ನು ಸೋಸಿ ಕೋಶಮುಕ್ತ ಯೀಸ್ಟ್‍ರಸ ತಯಾರಿಸಿದ. ಅದಕ್ಕೆ ಬ್ಯಾಕ್ಟೀರಿಯಾ ಪ್ರವೇಶಿಸದಂತೆ ಸಕ್ಕರೆಯ ಸಾರ ದ್ರಾವಣ ಕೂಡಿಸಿದ. ಹಣ್ಣಿನ ರಸ ಕೆಡದಂತೆ ಕಾಪಾಡಲು ಅದಕ್ಕೆ ಸಕ್ಕರೆ ಸೇರಿಸುವುದಿಲ್ಲವೇ ? ಹಾಗೆ, ಸಕ್ಕರೆ ಸೇರಿಸಿದ್ದೇ ತಡ, ಕಾರ್ಬನ್ ಡೈಆಕ್ಸೈಡ್ ಅನಿಲದ ಗುಳ್ಳೆಗಳು ಕಾಣಿಸಿಕೊಂಡವು. ಸತ್ತ ಯೀಸ್ಟ್ ಸಕ್ಕರೆಯನ್ನು ಆಲ್ಕೋಹಾಲ್ ಮತ್ತು ಕಾರ್ಬನ್ ಡೈ ಆಕ್ಸೈಡುಗಳಿಗೆ ಪರಿವರ್ತಿಸಲು ಪ್ರಾರಂಭಿಸಿತ್ತು. ಬಕ್‍ನರ್ ಏನನ್ನು ಸಾಧಿಸಲು ಹೊರಟಿದ್ದನೋ ಅದಕ್ಕೆ ವಿರುದ್ದವಾದ ಫಲಿತಾಂಶ ದೊರೆತಿತ್ತು. ಜೈವಿಕ ಸಿದ್ಧಾಂತದ ಕೋಟೆ ನೆಲಸಮವಾಗಿತ್ತು.
ಆದ್ದರಿಂದ ಜೀವಕೋಶಗಳಲ್ಲಿ ಜರಗುವ ರಾಸಾಯನಿಕ ಕ್ರಿಯೆಗಳಿಗೆ ಯಾವ ಜೈವಿಕ ಶಕ್ತಿಯ ನೆರವೂ ಬೇಕಿಲ್ಲ. ಅವು ನಡೆಯುವುದು ಫರ್ಮೆಂಟುಗಳಿಂದ. ಜೀವಕೋಶದ ಹೊರಗೆ ಕಾರ್ಯನಿರ್ವಹಿಸುವ ಫರ್ಮೆಂಟುಗಳಿಗೂ ಇವುಗಳಿಗೂ ಯಾವ ವ್ಯತ್ಯಾಸವೂ ಇಲ್ಲವೆಂದು ನಿಸ್ಸಂದೇಹವಾಗಿ ರುಜುವಾತಾಯಿತು. ಇಂಥ ಎಲ್ಲ ಫರ್ಮೆಂಟುಗಳನ್ನೂ ಕಿಣ್ವಗಳು ಎಂದು ಕರೆಯಲಾಯಿತು. ಈ ಮಹತ್ಸಾಧನೆಗಾಗಿ ಬಕ್‍ನರನಿಗೆ 1907ರಲ್ಲಿ ನೊಬೆಲ್ ಪಾರಿತೋಷಿಕ ಲಭಿಸಿತು. ಬಕ್‍ನರ್ ರಾಜಕೀಯವಾಗಿ ಬಿಸ್ಮಾರ್ಕ್ ಬೆಂಬಲಿಗನಾಗಿದ್ದು ನ್ಯಾಶನಲ್ ಲಿಬರಲ್ ಪಾರ್ಟಿಯ ಅನುಯಾಯಿ ಆಗಿದ್ದ. ಆಗಸ್ಟ್ 1914ರಲ್ಲಿ ಪ್ರಥಮ ಮಹಾಯುದ್ಧದ ಘೋಷಣೆಯಾದಾಗ ಬಕ್‍ನರ್ ಸೈನ್ಯದಲ್ಲಿ ಸಕ್ರಿಯ ಸೇವೆಸಲ್ಲಿಸಲು ಮುಂದಾದ. ಇವನನ್ನು ಶಸ್ತ್ರಾಸ್ತ್ರ ಸರಬರಾಜು ಪಡೆಯ ಕ್ಯಾಪ್ಟನ್ ಎಂದು ನೇಮಿಸಿ ಮುಂಚೂಣಿ ಪ್ರದೇಶಕ್ಕೆ ಕಳುಹಿಸಿ ಕೊಡಲಾಯಿತು. 1925ರಲ್ಲಿ ಮೇಜರ್ ಪದವಿಗೆ ಬಡ್ತಿ ನೀಡಲಾಯಿತು. ಆದರೆ ಅದೇ ವರ್ಷ ವುಟ್ಜ್ ಬರ್ಗ್ ವಿಶ್ವವಿದ್ಯಾಲಯ ಇವನನ್ನು ಬೋಧನೆಯಲ್ಲಿ ಪುನಃ ತೊಡಗುವಂತೆ ಪ್ರಾರ್ಥಿಸಿ ಹಿಂದಕ್ಕೆ ಕರೆಸಿಕೊಂಡಿತು. 1917ರಲ್ಲಿ ಇವನು ಮುಂಚೂಣಿ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಮತ್ತೆ ಮುಂದಾದ, ರುಮೇನಿಯಾದ ಮುಂಚೂಣಿ ಪ್ರದೇಶಕ್ಕೆ ಕಳುಹಿಸಿಕೊಡಬೇಕಾಯಿತು. ಅಲ್ಲಿ ಎರಚುಸಿಡಿಗುಂಡಿನಿಂದ ಗಾಯಗೊಂಡು ಎರಡು ದಿನಗಳ ಬಳಿಕ ಮೃತನಾದ.
 						       (ಎಜ್.ಜಿ.ಎಸ್.ಕೆ.; ಎಸ್.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ